25 +
ವರ್ಷಗಳ ಅನುಭವ
ಸದಾ ಮೈತುಂಬಿ ಹರಿಯುವ ಶರಾವತಿಯ ಸೆರಗ ಮೇಲೆ ಪವಡಿಸಿ, ಹೊನ್ನಿನ ಆಗರದಂತಿರುವ ಹೊನ್ನಾವರವು ಕರಾವಳಿ, ಮಲೆನಾಡು ಹಾಗೂ ಸಹ್ಯಾದ್ರಿಗಳ ಸಂಗಮ ಕ್ಷೇತ್ರವೂ ಹೌದು. ಬಡ ಮತ್ತು ಮಧ್ಯಮ ವರ್ಗದವರೇ ಬಹುಸಂಖ್ಯೆಯಲ್ಲಿರುವ ಈ ತಾಲೂಕಿನಲ್ಲಿ ಒಂದುವರೆ ಲಕ್ಷ ಜನಸಂಖ್ಯೆಯಿದೆ. ಎಲೆಮರೆಯ ಕಾಯಿಗಳಂತಿರುವ ಗ್ರಾಮೀಣ ಪ್ರತಿಭಾವಂತ ಯುವಶಕ್ತಿಯನ್ನು ವೈವಿಧ್ಯಮಯ ಸಂಪನ್ಮೂಲವಾಗಿ ರೂಪಿಸಬೇಕಾದ ಶೈಕ್ಷಣಿಕ ಅವಕಾಶಗಳು ತೀರಾ ವಿರಳವಾಗಿ, ಅದರಲ್ಲೂ ಉನ್ನತ ಶಿಕ್ಷಣವಂತೂ ಕನಸಿನ ಮಾತಾಗಿದ್ದ ಸಂದರ್ಭ ನಮ್ಮದಾಗಿತ್ತು. ಈ ಸಮಸ್ಯೆಗೊಂದು ಪರಿಹಾರವೋ ಎಂಬಂತೆ ಇಲ್ಲಿನ ಶಿಕ್ಷಣ ಪ್ರೇಮಿಗಳು ಸಾಂಘಿಕ ಪ್ರಯತ್ನ ನಡೆಸಿದ ಪರಿಣಾಮವಾಗಿ ಎಸ್.ಡಿ.ಎಮ್. ಮಹಾವಿದ್ಯಾಲಯ ತಲೆ ಎತ್ತಿ ನಿಂತಿತು.
1964ರಲ್ಲಿ ಈ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಯ ಕನಸು ಹೊತ್ತು ಎಂ.ಪಿ.ಇ. ಸೊಸೈಟಿ ಹುಟ್ಟಿಕೊಂಡಿತು. ದಿ. ಆರ್. ಎಸ್. ಹೆಗಡೆಯವರ ಅಧ್ಯಕ್ಷತೆಯಲ್ಲಿ ಕಾರ್ಯೋನ್ಮುಖವಾದ ಈ ಸಂಸ್ಥೆ 50 ಎಕರೆ ವಿಸ್ತಾರವಾದ ವಿಶಾಲ ಪ್ರದೇಶದಲ್ಲಿ ಈ ಮಹಾವಿದ್ಯಾಲಯವನ್ನು ಆರಂಭಿಸಿತು. ದಿ. ಆರ್. ಎಸ್. ಹೆಗಡೆಯವರ ದೂರದೃಷ್ಟಿತ್ವ, ರಾಜರ್ಷಿ ಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಕಾಲಿಕ ರಕ್ಷಣೆ ಹಾಗೂ ಪೋಷಣೆ, ಡಾ॥ ಎಂ. ಪಿ. ಕರ್ಕಿ ಹಾಗೂ ಇತರ ಆಡಳಿತ ಮಂಡಳಿಯ ಸದಸ್ಯರ ನಿರಂತರ ಕಾರ್ಯಕ್ಷಮತೆ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ, ತಾಲೂಕಿನ ಸಾವಿರಾರು ಶಿಕ್ಷಣ ಪ್ರೇಮಿಗಳ, ವಿದ್ಯಾರ್ಥಿಗಳ ಹಾಗೂಪಾಲಕರ ಸಕ್ರಿಯ ಸಹಕಾರ ನಮ್ಮ ಜೈತ್ರಯಾತ್ರೆಯ ಹೆಗ್ಗುರುತುಗಳಾಗಿವೆ.
ಹೊನ್ನಾವರದ ಹೊನ್ನಕಳಸದಂತೆ ನಗರದ ನೆತ್ತಿಯ ಮೇಲೆ ನಮ್ಮ ಮಹಾವಿದ್ಯಾಲಯ ತಲೆ ಎತ್ತಿ ನಿಂತಿದೆ. 164 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆ ಇಂದು ಎರಡು ಸಾವಿರ ವಿದ್ಯಾರ್ಥಿಗಳವರೆಗೆ ವಿಸ್ತಾರಗೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತು ವಿಷಯಗಳ ವೈವಿಧ್ಯತೆಗಳಿಗನುಗುಣವಾಗಿ ಸಮಯಾನುಸಾರ ಅಗತ್ಯ ಕಟ್ಟಡಗಳು ಸುಸಜ್ಜಿತ ಪ್ರಯೋಗಾಲಯಗಳು, ಜಿಲ್ಲೆಯಲ್ಲೇ ಅಪರೂಪವಾದ ವಿಶಾಲ ಕ್ರೀಡಾಂಗಣ, 50,000ಕ್ಕಿಂತ ಹೆಚ್ಚಿನ ಸಂಖ್ಯೆಯ ಅಪೂರ್ವ ಗ್ರಂಥಗಳನ್ನೊಳಗೊಂಡ ಸುಂದರ ಗ್ರಂಥಾಲಯ ಮುಂತಾದವು ನಮ್ಮ ವೈಶಿಷ್ಟ್ಯಗಳಾಗಿವೆ. ಅತ್ಯಾಧುನಿಕತೆಯ ಅವಿಭಾಜ್ಯ ಅಂಗಗಳಲ್ಲೊಂದಾದ ಕಂಪ್ಯೂಟರ್ ಶಿಕ್ಷಣಕ್ಕೂ ನಮ್ಮಲ್ಲಿ ವ್ಯಾಪಕ ಅವಕಾಶ ಕಲ್ಪಿಸಲಾಗಿದೆ. ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಸುಸಜ್ಜಿತವಾದ ಪ್ರಯೋಗಾಲಯ ,ನಿರ್ಮಾಣಗೊಂಡಿದೆ.