ಮಹಾವಿದ್ಯಾಲಯದ ಲಾಂಛನದ ಮಹತ್ವ

ನಮ್ಮ ಈ ಮಹಾವಿದ್ಯಾಲಯದ ಲಾಂಛನದ ಬಾಹ್ಯ ಆವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಿಂದ ರಾರಾಜಿಸುತ್ತಿದ್ದು, ಮಹಾವಿದ್ಯಾಲಯದ ದಿವ್ಯತೆಯನ್ನು ಮೆರೆಸುತ್ತಿದೆ.

ಈ ಲಾಂಛನದ ಆವಾರದೊಳಗಿರುವ ಅರಳುತ್ತಿರುವ ಕಮಲ ವಿದ್ಯೆಯನ್ನು ಬೇಡಿ ಬಂದ ವಿದ್ಯಾರ್ಥಿ ತನ್ನ ಮುಗ್ಧತೆಯನ್ನು ಕಳೆದುಕೊಂಡು ಹೃದಯ ಕಮಲವನ್ನು ಅರಳಿಸಿಕೊಳ್ಳುವ ಅವಕಾಶದ ಲಭ್ಯತೆಯನ್ನು ಪ್ರಮಾಣೀಕರಿಸುತ್ತದೆ. ಬೆಳಗುತ್ತಿರುವ ಹಣತೆ ಇಲ್ಲಿರುವ ಅನುಭವೀ ಹಾಗೂ ಪ್ರತಿಭಾವಂತ ಅಧ್ಯಾಪಕ ಸಮುದಾಯದ ಜ್ಞಾನದಾನ ಪ್ರಕ್ರಿಯೆಗೆ ಗುರುತು. ಉದಯಿಸುತ್ತಿರುವ ಸೂರ್ಯ ಜ್ಞಾನೋದಯದ ಭರವಸೆಯನ್ನು, ಆಕಾಶ ಹಾಗೂ ಸಮುದ್ರ ಜ್ಞಾನದ ವಿಸ್ತಾರ ಮತ್ತು ಅಮೂರ್ತತೆಯನ್ನು ಸೂಚಿಸುವುದಾಗಿದೆ. ಪುಟ ತೆರೆದ ಪುಸ್ತಕ “ಬೇಧವೆಣಿಸದೆ ಬನ್ನಿ ಜ್ಞಾನದೇಗುಲಕೆ” ಎಂಬ ಮುಕ್ತ ಆಹ್ವಾನವನ್ನು ಸಾಕ್ಷೀಕರಿಸುತ್ತದೆ.

ಅಡಿಯಲ್ಲಿ ಬರೆದಿರುವ “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬ ಸಂಸ್ಕೃತ ವ್ಯಾಸವಾಕ್ಯ ಸಂಸ್ಥೆಯ ಘೋಷ ವಾಕ್ಯವಾಗಿದ್ದು, ಸಂಸ್ಥೆಯ ಪೋಷಕರ ಆಶೋತ್ತರಗಳನ್ನು ನೆನಪಿಸುವುದಾಗಿದೆ. ಈ ಆಮರವಾಣಿ ಇಲ್ಲಿ ನೀವು ಪಡೆಯಬಹುದಾದ ವಿದ್ಯೆ ನಿಮ್ಮ ಹೃದಯ ಕಮಲವನ್ನು ಅರಳಿಸಿ ಹೃದಯವಂತಿಕೆಯನ್ನು ಬೆಳೆಸಿ, ವ್ಯಾವಹಾರಿಕ ಹಾಗೂ ಪಾರಮಾರ್ಥಿಕಗಳೆಂಬ ಉಭಯವಿಧ ವಿದ್ಯೆಯನ್ನು ನೀಡುವ ಹಂಬಲ ನಮಗಿರುವುದನ್ನು ಸೂಚಿಸುತ್ತದೆ.

ಹೀಗೆ ನಮ್ಮ ಈ ಸಂಸ್ಥೆಯ ಉದಾತ್ತವಾದ  ಧ್ಯೇಯ-ಧೋರಣೆಗಳ ಮೂರ್ತ ರೂಪವಾಗಿರುವ ಈ ಲಾಂಛನ ತಮಗೆಲ್ಲರಿಗೂ ನಿರಂತರ ಪ್ರಗತಿಗಾಗಿ ದುಡಿಯುವ ಪ್ರೇರಣೆಯನ್ನು ನೀಡಲಿ ಎಂದು ಆಶಿಸೋಣ.